ಚನ್ನಬಸವಾಂಕ

ಸು. 1550. ವೀರಶೈವ ಕವಿ; ಮಹಾದೇವಿಯಕ್ಕನ ಪುರಾಣವನ್ನು ಬರೆದಿದ್ದಾನೆ. ಈತನ ಪಿತಾಮಹ ಬಸವಾಂಕ. ಪಿತಾಮಹಿ ಗಂಗಾಂಬೆ. ತಂದೆ ರುದ್ರಕವಿ ನಾಗಭೂಷಣಾಚಾರ್ಯ. ಗುರು ವ್ಯಾಘ್ರಾಜಿನಾಂಬರದ ಕಥೆಯ ಚಿದಾನಂದ ಯತಿಪ ಬಸವರಾಜ. ಪ್ರೌಢದೇವನಿಗೆ ಹೇಮಕೂಟದ ವಿರಕ್ತರ ಗುಣವನರಿಪಿದ ಕರಸ್ಥಲದ ನಾಗಿದೇವನನ್ನೂ (ಸು. 1430) ಅಮಲಬಸವಪುರಾಣ ಕರ್ತೃವಾದ ಶೃಂಗೀರಾಜನನ್ನೂ (ಸು. 1500) ಸ್ಮರಿಸುವುದರಿಂದ ಕವಿಯ ಕಾಲ ಸು. 1550 ಆಗಿರಬಹುದೆಂದು ಊಹಿಸಲಾಗಿದೆ. ಹರಿಯರಸ, ರಾಘವ, ಕೆರೆಯ ಪದ್ಮರಸ, ಕೇಶಿರಾಜ, ಭೀಮರಸ ಇವರು ಈತ ಸ್ಮರಿಸಿರುವ ಇತರ ಕವಿಗಳು.

ಅಕ್ಕಮಹಾದೇವಿಯನ್ನು ಕುರಿತ ಮಹಾದೇವಿಯಕ್ಕನ ಪುರಾಣ ನಾನಾ ಷಟ್ಪದಿಗಳಲ್ಲಿದೆ. ನಡುನಡುವೆ ಕೆಲವು ಸಾಂಗತ್ಯಗಳು ಇವೆ. ಗ್ರಂಥಾವತಾರದಲ್ಲಿ ಶಿವಸ್ತುತಿ ಇದೆ. ಬಳಿಕ ನಂದಿ, ಭೃಂಗಿ, ವೀರಭದ್ರ ಇವರುಗಳನ್ನು ಸ್ತುತಿಸಿ ಸಿದ್ಧರಾಮನೇ ಮೊದಲಾದ ಪುರಾತನರನ್ನು ಸ್ಮರಿಸಿದ್ದಾನೆ. ಮಹಾದೇವಿಯಕ್ಕನ ಚರಿತೆಯನ್ನು ಹರೀಶ್ವರ ರಘಟಾರೂಪದಿಂದ ಬರೆದಿದ್ದಾನೆ. ನೀನು ಷಟ್ಪದಿಯಾಗಿ ಬರೆ ಎಂದು ತನ್ನ ಗುರು ಬಸವರಾಜ ಆಜ್ಞಾಪಿಸಲು ಈ ಗ್ರಂಥವನ್ನು ಬರೆದಂತೆ ಕವಿ ಹೇಳಿಕೊಂಡಿದ್ದಾನೆ.

ಈತನ ಬಂಧ ಹೃದಯಂಗಮವಾಗಿದೆ. ವರ್ಣನೆಗಳು ಸಮಯನಿಷ್ಠವಾಗಿವೆ. ಗ್ರಂಥ ದೊಡ್ಡದಾದರೂ ಕಾವ್ಯದೃಷ್ಟಿಯಿಂದ ಚೆನ್ನಾಗಿಲ್ಲದಿಲ್ಲ. ನಾಯಕಿ ಪಟ್ಟ ಅನೇಕ ತೊಂದರೆಗಳು ಹೃದ್ಯವಾಗಿ ವರ್ಣಿತವಾಗಿವೆ.
(ಎಂ.ಎಸ್.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ